ಪ್ರೀತಿಗೆ ಜಾತಿ, ಮತ, ವಯಸ್ಸಿನ ಹಂಗಿಲ್ಲ. ಕಾಲದ ಗಡುವಿಲ್ಲ. ಪ್ರೀತಿ ವಿಷಯ ಇಂದು-ನಿನ್ನೆಯದಲ್ಲ. ಇದಕ್ಕಾಗಿ ಕೋಟೆ ಕೊತ್ತಲುಗಳು ಉರುಳಿವೆ. ಎಷ್ಟೋ ಜೋಡಿಗಳು ಪ್ರಾಣ ಕಳೆದುಕೊಂಡಿವೆ. 
ಪ್ರೀತಿ ಇಲ್ಲದೆ ಜಗತ್ತೇ ಇಲ್ಲ. ಪ್ರೀತಿ ಅನ್ನೋದು ಗುಲಾಬಿಯಷ್ಟೇ ಮೃದುವಾದರೂ ಜತೆಗಿರುವ ಮುಳ್ಳಿನಷ್ಟೆ ಮೊನಚು. ಪ್ರೀತಿಯ ಸಂಕೋಲೆಯಲ್ಲಿ ಒಮ್ಮೆ ಸಿಲುಕಿದರೆ ಹೊರ ಬರುವುದು ಕಷ್ಟ. ಕ್ಷಣಕ್ಷಣವೂ ಕಾಡುವ ಮಧುರ ಭಾವನೆಗಳು, ಹೇಳಿಕೊಳ್ಳದ ವೇದನೆಗಳು ಹುಟ್ಟಿಕೊಳ್ಳಲು ಯಾರ ಮಾರ್ಗದರ್ಶನವೂ, ಯಾವ ಕೋಚಿಂಗ್ ಕ್ಲಾಸ್ ಗೆ ಹೋಗುವ ಅಗತ್ಯವೂ ಇಲ್ಲ. ಒಮ್ಮೆ ಪರಸ್ಪರರ ಆಲೋಚನೆಗಳಿಗೆ ಮನಸ್ಸು ಹೊಂದಿಕೊಂಡರೆ
ಪ್ರೀತಿ ಹುಟ್ಟೊದು ಸಹಜ. ಹೀಗೆ ನಮ್ಮ ಕಥಾನಾಯಕ ಸುನಿಲ್‌ಗೂ ಸೌಮ್ಯಳ ಮೇಲೆ  ಪ್ರೀತಿಯಾಯಿತು.


ಸುನಿಲ್ ಹಾಗೂ ಸೌಮ್ಯ ಇಬ್ಬರೂ ಒಂದೇ ಕಾಲೇಜಿನ‌ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಇಬ್ಬರೂ ದೂರದ ಹಳ್ಳಿಯಿಂದ ಬರುತ್ತಿದ್ದರು. ಅಲ್ಲದೆ, ಸುನಿಲ್ ನ ಊರಿಂದ ಸೌಮ್ಯಳ ಊರು ಐದು ಕಿ.ಮೀ ದೂರ ಇತ್ತು. ಒಂದೇ ರಸ್ತೆ, ಅಲ್ಲದೆ ಕಾಕತಾಳೀಯ ಎಂಬಂತೆ ಹೋಗಲು ಬರಲು ಇದ್ದಿದ್ದು ಏಕೈಕ ಬಸ್ಸು.

ಸೌಮ್ಯಳ ಊರು ಮೊದಲು ಬರುವುದರಿಂದ ಸುನಿಲ್‌ ಬಸ್ಸು ಹತ್ತುವುದಕ್ಕೂ ಮೊದಲೆ ಸೌಮ್ಯ ಆ ಬಸ್ಸಲ್ಲಿ ಬರುತ್ತಿದ್ದಳು. ಮೊದಮೊದಲು ಒಬ್ಬರಿಗೊಬ್ಬರು ನೋಡಿ‌ ಪರಿಚಯದ ನಗುವನ್ನು exchange ಮಾಡಿಕೊಂಡರೂ ಪ್ರಯಾಣ ಮಾತ್ರ ಮೌನದಲ್ಲೆ ಸಾಗುತ್ತಿತ್ತು. ಅಲ್ಲದೆ, ಸೌಮ್ಯಳ ಪಕ್ಕದ ಸೀಟ್ ಖಾಲಿ ಇದ್ದರೂ ಸುನಿಲ್ ಕೂರುತ್ತಿರಲಿಲ್ಲ. ಕೆಲವೊಮ್ಮೆ ಬಸ್ಸಿನಲ್ಲಿ ಜನಸಂದಣಿಯಾದಾಗ ಸುನಿಲ್ ಬಾಗಿಲ ಬಳಿಯೆ ನಿಲ್ಲುತ್ತಿದ್ದ

ಹೀಗೆ ಒಂದು ಹದಿನೈದು ದಿನ‌ ಕಳೆದಿತ್ತು. ಇದನ್ನೆಲ್ಲ ದಿನಾಲೂ ನೋಡುತ್ತಿದ್ದ ಸೌಮ್ಯಳಿಗೆ ಇದ್ದಕ್ಕಿದ್ದಂತೆ ಏನಾಯ್ತೊ ಗೊತ್ತಿಲ್ಲ. ಒಂದು ದಿನ ಸೌಮ್ಯ ತನ್ನ ಪಕ್ಕದ ಸೀಟ್ ನಲ್ಲಿ ಬ್ಯಾಗ್ ಇಟ್ಟು ಸುನಿಲ್‌ಗಾಗಿ ಸೀಟನ್ನು ಕಾಯ್ದಿರಿಸಿದ್ದಳು. ಸುನಿಲ್‌ ಬಸ್ಸು ಹತ್ತಿ ಸೌಮ್ಯಳ‌ ಪಕ್ಕದಲ್ಲಿ ಬಂದು ನಿಂತು ಎಂದಿನಂತೆ ಪ್ರೀತಿಯ ನಗು ಬೀರಿದ. ಪ್ರತಿಯಾಗಿ ಸೌಮ್ಯ ಕೂಡ ಮಗುಳುನಗೆ ಬೀರಿ ತನ್ನ ಬ್ಯಾಗ್ ಎತ್ತಿ ಸುನಿಲ್ ಗೆ ಕೂರುವಂತೆ ಸನ್ನೆ ಮಾಡಿದಳು. ಆದರೂ ಸುನಿಲ್ ಸ್ವಲ್ಪ‌ ಸಂಕೋಚ ಸ್ವಭಾವದವನಾಗಿದ್ದರಿಂದ ಆಕೆಯ ಪಕ್ಕ‌ ಕುಳಿತುಕೊಳ್ಳಲು ಮುಜುಗರ ಪಡುತ್ತಿದ್ದ. ನಂತರ ಸೌಮ್ಯ "ಬಾ ಕೂತ್ಕೊ" ಎಂದು ಸ್ವಲ್ಪ ಜೋರು ಧ್ವನಿಯಲ್ಲಿ ಹೇಳಿದಾಗ ಸುನಿಲ್ ನಿಧಾನವಾಗಿ ಆಕೆಯ ಪಕ್ಕದಲ್ಲಿ ಕುಳಿತುಕೊಂಡ. ಆ ದಿನದಿಂದ ಒಂದೇ ಬಸ್ಸಿನಲ್ಲಿ, ಒಂದೇ ಸೀಟಿನಲ್ಲಿ ಕುಳಿತು ಪ್ರಪಂಚದ ಪರಿವೇ ಇಲ್ಲದೆ ಹರಟೆ ಹೊಡೆಯುತ್ತಾ ಸುನಿಲ್ ಹಾಗೂ ಸೌಮ್ಯಳ ಪ್ರೀತಿಯ ಪ್ರಯಾಣ ಸಾಗಿತ್ತು.

ಪ್ರತಿದಿನ ಬಸ್ಸಿನಲ್ಲಿ ಜನಜಂಗುಳಿ ಇದ್ದರೂ ಸುನಿಲ್ ಮಾತ್ರ ನಿಶ್ಚಿತೆಯಿಂದ ಇರುತ್ತಿದ್ದ . ಕಾರಣ, ಆತನಿಗಾಗಿ‌ ಸೌಮ್ಯ ಸೀಟೊಂದನ್ನು reserv ಮಾಡಿರುತ್ತಿರುವುದು ಖಾತ್ರಿಯಾಗಿತ್ತು ಸುನಿಲ್ ಗೆ.
ಬಸ್ಸಿನಲ್ಲಿ ಅದೆಷ್ಟೆ ಗೌಜು,ಗದ್ದಲಗಳಿದ್ದರೂ ಇವರ ಹರಟೆಗೆ ಅದು‌ ಎಂದೂ ಅಡ್ಡಿಯಾಗಿರಲಿಲ್ಲ. ಬದಲಾಗಿ ಈ‌ ಪ್ರಯಾಣ ಎಂದೂ ಕೊನೆಯಾಗದಿರಲಿ‌ ಎಂದು ಇಬ್ಬರ ಮನವೂ ಪರಿತಪಿಸುತ್ತಿತ್ತು. ಆದರೆ ಪ್ರತಿಯೊಂದು ಆರಂಭಕ್ಕೂ ಒಂದು‌ ಅಂತ್ಯವಿರುತ್ತದೆ. ಇವರ ಪ್ರೇಮಕ್ಕೆ ಆ ಬಸ್ಸು, ಡೈವರ್, ಕಂಡಕ್ಟರ್ ಹಾಗೂ ಪ್ರತಿದಿನ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು.

ರವಿವಾರ ಬಂತೆಂದರೆ ಆಕೆಯನ್ನು ನೋಡಲಾಗದೆ ಸುನಿಲ್ ನ ಮನ ಚಂಚಲವಾಗುತ್ತಿತ್ತು. ಸೋಮವಾರ ಸೌಮ್ಯಳನ್ನು ನೋಡಿದಾಗಲೆ ಸುನಿಲ್‌ನ ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು. ಆಕೆಯ ಮುದ್ದಾದ ನಗು, ಸಿಹಿಯಾದ ಮಾತು ಸುನಿಲ್‌ಗೆ ಎಲ್ಲಿಲ್ಲದ ಆನಂದ ನೀಡುತ್ತಿತ್ತು. ಕಾಲೇಜು ಮುಗಿದ ಮೇಲೆ ನಾವು ಮದುವೆಯಾಗೊಣ ಎಂದು ಒಬ್ಬರಿಗೊಬ್ಬರು ತಮ್ಮ ಆಸೆಯನ್ನು ಭರವಸೆಯಾಗಿ ನೀಡುತ್ತಿದ್ದರು.

ಇವರ ಈ ಪ್ರೇಮ‌ ಪ್ರಸಂಗ ಕಾಲೇಜಿನ‌ ಕ್ಲಾಸ್ ರೂಂ ಅನ್ನು ದಾಟಿ , ಕಾರಿಡಾರ್, ಕ್ಯಾಂಟೀನ್‌ಗಳಲ್ಲೂ ಚರ್ಚೆ ಶುರುಮಾಡಿತ್ತು.
ಬಸ್ಸಿನಲ್ಲಿ ಪಟಾಯಿಸಿದ ಹುಡುಗಿ ಎಂದು ಕೆಲವರು ಸುನಿಲ್‌ಗೆ ರೇಗಿಸಿದ್ದು ಇದೆ...

ಹೀಗೆ ಈ ಪ್ರೀತಿಯ ವಿಷಯ ಕಾಲೇಜಿನ ಕಂಪೌಡ್ ಹಾರಿ ಇವರಿಬ್ಬರ ಮನೆಯೊಳಗೆ ಲಗ್ಗೆ ಇಟ್ಟು ರಾದ್ಧಾಂತ ಸ್ರಷ್ಟಿಸಿತ್ತು. ಅಲ್ಲಿಂದ ಈ ಪ್ರೇಮಿಗಳ ಪಯಣ ಹೂವಿನ ಹಾದಿಯಿಂದ ಮುಳ್ಳಿನ ದಾರಿಯೆಡೆಗೆ ಸಾಗಿತು.

ಸೌಮ್ಯಳ ಮನೆಯವರು ಆಕೆ ಕಾಲೇಜಿಗೆ ಹೋಗುವುದನ್ನು ತಡೆದರು. ಇತ್ತ ಸುನಿಲ್‌ನ ತಂದೆ, ಅಣ್ಣ, ಚಿಕ್ಕಪ್ಪ ಎಲ್ಲರೂ ಹುಡುಗಿಯ ಬಗ್ಗೆ ಮಾಹಿತಿ ಕಲೆಹಾಕಿದರು. ಅಲ್ಲದೇ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು. ಸೌಮ್ಯಳ‌ ಹಟಕ್ಕೆ ಆಕೆಯ ಮನೆಯವರು ಆಕೆಯನ್ನು ಸುನಿಲ್‌ಗೆ ಕೊಟ್ಟು ಮದುವೆ ಮಾಡಲು ಒಪ್ಪಿಕೊಂಡು, ಸ್ವತಃ ಸುನಿಲ್‌ನ ಮನೆಗೆ ಬಂದರು. ಆದರೆ ಸುನಿಲ್ ನ ಮನೆಯವರು ಈ ಸಂಬಂಧವನ್ನು ಸ್ಪಷ್ಟವಾಗಿ ನಿರಾಕರಿಸಿದರು. ಅಲ್ಲೇ ನಿಂತಿದ್ದ ಸುನಿಲ್ ಕೂಡ ಏನೂ ಹೇಳಲಾಗದೆ ಅಪರಾಧಿಯಂತೆ ತಲೆ ಕೆಳಗೆ ಹಾಕಿ‌ ನಿಂತುಬಿಟ್ಟ.

ಇದಾದ ಕೆಲ‌ ದಿನಗಳ ನಂತರ ಸುನಿಲ್‌, "ಮನದ ಹಂಬಲದ ಕನಸೆಲ್ಲವೂ ಮಂಜಂತೆ ಕರಗಿ ಮರೆಯಾಯಿತೆ" ಎನ್ನುತ್ತಾ ಸೌಮ್ಯಳಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ . ಪರೀಕ್ಷೆಯನ್ನು ಬರೆಯದೆ ಶಿಕ್ಷಣ ಹಾಗೂ ಪ್ರೇಮ ಎರಡನ್ನೂ‌ ಅರ್ಧ ದಾರಿಯಲ್ಲೆ ಬಿಟ್ಟುಬಿಟ್ಟ‌ . ತನ್ನಿಂದಾಗಿ ಸೌಮ್ಯಳ ಬದುಕೂ ಹಾಳಾಯಿತು ಎಂದು ನೊಂದುಕೊಂಡ.

ಸ್ವಲ್ಪ ಸಮಯದ ನಂತರ ಸೌಮ್ಯಳ ಮದುವೆಯಾಯಿತು. ಆಕೆಯೂ ಮದುವೆಯ ಘಳಿಗೆಯಲ್ಲಿ ತನ್ನ ಪ್ರಥಮ ಪ್ರೇಮವನ್ನು ನೆನದು ಕಣ್ಣೀರಿಟ್ಟಳು.

ಕೆಲ ತಿಂಗಳ ನಂತರ ಸುನಿಲ್‌ನ ತಂದೆ ಆತನಿಗೆ taxi ಕೊಡಿಸಿದ್ರು. ಊರ ಹೊರಗಡೆ ಪೇಟೆಯಲ್ಲಿ taxi ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ ಸುನಿಲ್.

ಒಂದು ದಿನ‌ ಮಧ್ಯಾಹ್ನದ ಹೊತ್ತು taxi standನಲ್ಲಿ ತನ್ನ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಸುನಿಲ್‌ನ ಎದುರು ಒಂದು ಬಿಳಿ ಬಣ್ಣದ ಐಶಾರಾಮಿ ಕಾರು ಬಂದು ನಿಂತಿತು.
ಕಾರಿನ ಕಿಟಕಿ ನಿಧಾನವಾಗಿ ಕೆಳಗೆ ಇಳಿಯುತ್ತಿದ್ದಂತೆ ಸುನಿಲ್ ನ ಎದುರು ಬಿಳಿ ಬಣ್ಣದ ಪಂಜಾಬಿ ಡ್ರೆಸ್, ಬಾಬ್ ಕಟ್ ನಲ್ಲಿ ಮುದ್ದು ಮುದ್ದಾಗಿ ಅತ್ಯಂತ ಸುಂದರವಾಗಿ, ದೇವ ಲೋಕದ ಅಪ್ಸರೆಯಂತೆ ಆತನ ಮೊದಲ ಪ್ರೇಯಸಿಯನ್ನು ಕಂಡಾಗ ಸುನಿಲ್ ತನ್ನ ತಲೆಯನ್ನು ಕೆಳಗೆ ಹಾಕಿದ. ಆಕೆಯನ್ನು ಕಣ್ಣೆತ್ತಿ ನೋಡುವ ಧೈರ್ಯ ಆ ಸಮಯದಲ್ಲಿ ಸುನಿಲ್ ಗೆ ಇರಲಿಲ್ಲ. ಇಬ್ಬರಿಗೂ ಒಮ್ಮೆ ಆ ಹಳೆಯ ದಿನಗಳು ಕಣ್ಣೆದುರು ಬಂದವು. ಆ ಬಸ್ಸು, ಹರಟೆ, ಕಾಲೇಜು, ಕೆರೆ ,ಪಾರ್ಕು ಅಂತ ಸುತ್ತಾಡಿದ್ದು ಎಲ್ಲವೂ ನೆನಪಾದವು.

ಸೌಮ್ಯಳ‌ ಗಂಡ ಇಂಜಿನಿಯರ್ ಎನ್ನುವುದನ್ನು ತಿಳಿದು ಸುನಿಲ್ ಮನಸ್ಸಿನಲ್ಲೆ ಸಂತಸಗೊಂಡಿದ್ದ. ತಾನು ಆಕೆಗೆ ಮೋಸ ಮಾಡಿದೆ ಎನ್ನುವುದನ್ನು ನೆನೆದು ನಿತ್ಯವೂ ದುಃಖಿಸುತ್ತಿದ್ದ ಸುನಿಲ್‌ಗೆ ಈಗ ಆಕೆಗೆ ಒಳ್ಳೆಯದಾಗಿದೆ ಆಕೆ ಚೆನ್ನಾಗಿದ್ದಾಳೆ ಎಂದು ತಳಿದು ಮನಸ್ಸಿಗೆ ಸ್ವಲ್ಪ ಸಮಾಧಾನ‌ ತಂದುಕೊಂಡ. ಆದರೆ ಸುನಿಲ್‌ನ ಪರಿಸ್ಥಿತಿ ನೋಡಿ ಸೌಮ್ಯಳ ಮನದಲ್ಲಿ ನೋವು ಇಮ್ಮಡಿಯಾಗಿ ಕಣ್ಣೀರು ಕಪಾಳಕ್ಕೆ ಜಾರಿತ್ತು...




ಎಷ್ಟೊಂದು ವಿಚಿತ್ರ ಅಲ್ವಾ ಈ ಪ್ರೇಮ. ಎಲ್ಲಾ‌ ಇದ್ದು ಬದುಕು ಸುಂದರವಾಗಿರುವಾಗಲೂ ಸಂತೋಷವಾಗಿರಬೇಕಾದ ಸೌಮ್ಯ ತನ್ನ ಪ್ರಿಯಕರ ನನ್ನು ನೆನೆದು ಕಣ್ಣೇರು ಹಾಕಿದರೆ, ತಾನು ನೋವಿನಲ್ಲಿದ್ದರೂ ತನ್ನ ಪ್ರೇಯಸಿಯ ಬದುಕು ಸುಂದರವಾಗಿದೆ ಎಂದು ತಿಳಿದು ಸುನಿಲ್ ಖುಷಿ ಪಡುತ್ತಿದ್ದಾನೆ..

ಸ್ವಲ್ಪ ಗಡಿಬಿಡಿಯಲ್ಲಿ‌ ಬರೆದಿದ್ದೇನೆ. ತಪ್ಪಿದ್ದರೆ ತಿಳಿಸಿನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ,
ನಾಗೇಂದ್ರ ಉಪ್ಪುಂದ.